• kanasu 14w

    ಆಗೀಗಷ್ಟು ತುಂಡು ಕಟ್ಟಿಗೆಗಳ ಜೋಡಿಸಿ
    ನಮ್ಮ ಹಸಿವನ್ನ ಸುಟ್ಟವಳು

    ಅವರಿವರ ಮನೆಗೆಲಸ ಮಾಡಿ
    ಮನೆಬಾಡಿಗೆ ಕಟ್ಟಿದವಳು

    ಅಣ್ಣಂದಿರ ಬಳಿ ಕೈಚಾಚಿ
    ಹಣಪಡೆದು ಶಾಲೆಯಂಗಿ ಹೊಲಿಸಿದವಳು

    ಚೂರು ಸ್ವಾರ್ಥ
    ಅತಿಯಾದ ಸ್ವಾಭಿಮಾನ
    ಕಷ್ಟಕಲಿಸಿದ ಪಾಠ
    ಬದುಕು ತಿರಸ್ಕರಿಸಿದ ಕೋಪ
    ರೇಖೆಗಳಿಲ್ಲದ ಹಸ್ತಗಳು
    ಸಾವಿಗಿಂತಲೂ ಬದುಕಿನ ಭಯ
    ನಾಳೆಗಳ ಚಿಂತೆ
    ಮುಖದ ಮೇಲೊಂದು ಸಣ್ಣ ಕಿರುನಗೆ
    ಇವಿಷ್ಟೂ ನನ್ನವ್ವನ ಆಸ್ತಿ!!!

    ©kanasu