Grid View
List View
 • satyamangala 25w

  ಜೀವ ದರ್ಪಣ

  ಜೀವಾಕರ್ಷವೇ ಹೂವಾಗುವ ಘಳಿಗೆಯಲಿ
  ಭಾವೋತ್ಕರ್ಷದ ಬೆಳಕಾಗಿ ಬಂದೆ
  ಸಿರಿಯಾದೆ ಬಿಡುಗಡೆಗೆ ದುಡಿದವರಿಗೆ
  ವರದಂತೆ ದುಡಿದೆ ಸರಳತೆಗೆ
  ಮೆರೆವ ಭಾರತದ ಬಾಪುವಿನ
  ನೊಗ ಹೊತ್ತ ಕಾಯಕ ಯೋಗಿಯೇ

  ವಿಪುಲವಾಗಿಹ ದಾಹ ಶರದಿಯಲಿ
  ತಣ್ಣೆಳಲ ತಂಬೆಲರ ಕಣಿವೆಯ ತೆರೆದೆ
  ಕಿರಣದುದಯದ ಕಾರಣದ ಬೆಳಕಿಂಗೆ
  ತೈಲದಂತುರಿವ ಯೋಜನೆಯ ಕತೃವಾದೆ

  ಅರಿವನ್ನು ಅನವರತ ಪೂಜಿಸಿದ ಮೌನಿಯೇ
  ಧ್ಯಾನದ ಎಚ್ಚರವನ್ನು ಅಚ್ಚರಿಯಲಿ ಕಂಡಿರಿಸಿದೆ
  ಅಕ್ಷರವ ಹಂಚುವ ದಯೆಯ ಕಾರಣಿಕವಾಗಿ
  ಆಗಸದ ತುಂಬೆಲ್ಲ ಹಕ್ಕಿ ಹಾರುವ ತೆರದಿ
  ಹಾರುವ ಹಕ್ಕಿಗಳ ತಾಯಾಗಿ ತಂದೆಯಾಗಿ
  ಮನದೊಳಗೆ ಕುಸುಮಿಸಿದೆ
  ಎಲ್ಲಾ ಬೇಕೆನುವವರ ಮಧ್ಯೆ
  ಬೇಡ ವೆನ್ನುವ ದಯಾಳುವೆ

  ಅನ್ನದ ರಹದಾರಿಯನು ಹಸಿವಿನ ಕೋಣೆಗಳನು
  ಕ್ರಮಿಸಿ ಕ್ರಮಗೊಳಿಸುವ ಅಭಿಯಂತರನಾದೆ
  ಹೂವಿನ ಹಾಡನು ಕೇಳುವ ಸೂಕ್ಷ್ಮ ಸಿಂಧುವೆ
  ಹಾಡಿನೊಳಗಣ ತಾಳಲಯ ಭಾವಕ್ಕೆ
  ಉಸಿರಿನೊಳಗಣ ತೇಜವನು ಶೃತಿಗೊಳಿಸಿದೆ

  ಬರೆಯುವುದನು ಬದುಕಿದೆ
  ಬದುಕಿನಂತೆ ಬರೆದೆ
  ಎವೆತೆರೆವ ಗುಬ್ಬಿ ಗೊರವಂಕಗಳಿಗೆಲ್ಲಾ
  ಕೋಗಿಲೆ ಮರಿದುಂಬಿಗಳನೆಲ್ಲಾ
  ತನ್ನೆದೆಯನೆ ಗೂಡಾಗಿಸಿದೆ
  ವಸಂತಕಾಲವನೆ ಕಾಯದೆ ವಸಂತವನೆ ಸೃಷ್ಟಿಸಿದೆ

  ಮಾತು ಸೋತಾಗ ಮೌನವನೆ ಮಿಡಿಸಿದೆ
  ಅಡಿಗಡಿಗು ಎಚ್ಚರವನೆ ಚಿಗುರಿಸಿದೆ
  ಸಂತೋಷವನು ಆನಂದದ ಎತ್ತರಕೆ
  ಉಲ್ಲಾಸವನು ಉತ್ಥಾನಕ್ಕೆ ದಾಟಿಸಿದೆ
  ಉದಯಿಸಿದೆ ಉದಯಗೊಳಿಸಿದೆ

  ಕಾರ್ತಿಕ ದೀಪದಂತೆ ಮುಗಿಲನಾವರಿಸಿದೆ
  ಮಿತಿಯ ಉಜ್ವಲಗೊಳಿಸೆ ಬಂಧುವಾದೆ
  ಆತ್ಮ ಹುರಿಗೊಳ್ಳುತಿದೆ ನಿನ್ನಾತ್ಮ ದರ್ಶನಕೆ
  ಪದ ಸೋಲುತಿವೆ ಜೀಯ ನಿನ್ನ ಗುಣ ಗ್ರಹಣಕ್ಕೆ
  ನಿನ್ನ ಪದತಳದಲ್ಲಿ ಬಿರಿಯುತಿಹ
  ಮೊಗ್ಗೆಂದು ಗಣಿಸಿ ಕಾಯಕವನಿತ್ತ ಜೀವ ದರ್ಪಣವೆ
  ವಂದಿಸುತ ತಲೆಬಾಗಿ ಮಣಿವುದೆನ್ನ
  ಕಾಯಕವು ದಿನ ದಿನವು.......
  --------------------
  : ಡಾ.ವೂಡೇ ಪಿ ಕೃಷ್ಣ ಸರ್ ಅವರ ಕುರಿತು ಬರೆದ ಪದ್ಯ

  - ಸತ್ಯಮಂಗಲ ಮಹಾದೇವ

 • satyamangala 29w

  Word Prompt:

  Write a 8 word short write-up on Chaos

  Read More

  ಸತ್ಯ

 • satyamangala 29w

  ವಿರಾಮ

  ಊಟಕ್ಕೆ ಜೀರ್ಣವಾಗುವ
  ಕನಸು ಬಿತ್ತು
  ಕನಸಿಗೂ ಹಸಿವಿತ್ತು
  ನಿತ್ರಾಣವಾದ ಹೊಸತನವಿತ್ತು
  ಅನ್ನಕ್ಕೆ ವಿರಾಮವಿಲ್ಲ
  ಶಕ್ತಿಯಾಗುವ ರೂಪಾಂತರಕೆ
  ತನ್ನ ಪ್ರಯಾಣವ ಬೆಳೆಸಬೇಕು

  ಉಸಿರಿಗೆ ಜೀವವಾಗುವ
  ಅನಿವಾರ್ಯತೆ ಇದೆ
  ಮನುಷ್ಯನೋ ಪ್ರಾಣಿಯೋ
  ಕ್ರಿಮಿ ಕೀಟವೋ ಯಾವ ದೇಹವೋ
  ಪಡೆದ ಎಲ್ಲವನ್ನು ಕಳಚಿ
  ಹೊರಡಲು ತಯಾರಾಗಬೇಕು

  ಹಾರಲು ಈಜಾಡಲು
  ಕೂತು ಕೂತು ಕೊಳೆಯಲು
  ಬಂಡಯಂತಿರಲು
  ಅನಂತಕೂ ಆವರ್ತವಿದೆ
  ಕಾಲಾಂತರದ ಕಾಲಪಕ್ಷಿಯಾಗಲು
  ಜಡವಾಗುವ ಅವಶ್ಯಕತೆಯಿದೆ
  ಬೇಕು ಬೇಡಗಳ ಬಿಟ್ಟು ನಿರಾಳವ
  ತಬ್ಬುವ ಏಕಾಂತಕ್ಕೆ ಜಾರಬೇಕಿದೆ


  ಕೀರ್ತಿಗೆ ಅವಕಾಶಗಳ ದಾಟುವುದಕೆ
  ಕಲಿಕೆ ಬೇಕಿದೆ ಅಪಮಾನಗಳಲ್ಲೂ
  ಕಿರೀಟವಿಲ್ಲದ ರಾಜನಾಗುವುದಕೆ
  ಸಿಂಹಾಸನಗಳಿಲ್ಲದ ರಸಿಕನಾಗುವುದಕ್ಕೆ
  ಮಾನವತೆಯ ಅಮೃತ ಬೇಕಿದೆ
  ಸಾಮಾನ್ಯನಾಗುವುದಕ್ಕೆ
  ಮತ್ತೆ ಮತ್ತೆ ವಿರಾಮವೊಂದು ಬೇಕಿದೆ
  ಮನುಷ್ಯನಿಂದ ಮಾನವತೆಗೆ ಏರುವುದಕ್ಕೆ.


  - ಶ್ವೇತ ಮಂಡ್ಯ

 • satyamangala 29w

  ಬೆಳದಿಂಗಳು

  ಹೆಜ್ಜೆಮೇಲೆ ಹೆಜ್ಜೆ ಇಟ್ಟು ಬರುವಾಗ
  ಹಂಸದಂತೆ ಬಂದಳು
  ಚಂದಿರನ ನಾಚಿಸುವಾ ಬೆಳದಿಂಗಳು

  ಕೇಶರಾಶಿ ಹರಡಿರಲು ಎದೆಮೇಲೆ
  ಸೂಜಿ ಮನೆಯ ಮೊಗ್ಗಿನಂತೆ ರತಿ ಲೀಲೆ

  ಸೀರೆಯಲಿ ನೀರೆಯನು
  ನೋಡುತಲಿ ಕಣ್ಣುಗಳು
  ರೆಪ್ಪೆಬಡಿದು ನಿಂತವು
  ನಾಚಿ ಮೈಯ ಮರೆತವು

  ತುಟಿಯ ರಂಗು ಕಂಡ ತುಟಿಯು
  ಕಟಿಯ ಸಂಗ ಬಯಸಿತು
  ರಂಗನಿಟ್ಟು ರಂಗೋಲಿಗೆ
  ಪ್ರೇಮದಂತೆ ಸೆಳೆಯಿತು

  ಮೂಗುತಿಯಲಿ ಪಂಚಪ್ರಾಣ
  ಕಂಡ ಉಸಿರು ಅರಳಿತು
  ಧಾವಿಸುತ ಓಡೋಡಿ
  ಬೆರೆಯಲು ಮನ ಕಾಡಿತು

  ಬೆರಳುಗಳಲಿ ನಾದ ವೇದ
  ಅವಳ ಮೈ ಸೋಕಲು
  ಮೋಡ ಬಿಟ್ಟು ಹೊರಟಂತೆ
  ಮಳೆಯ ಜತನ ವಸುವಿಗೆ
  ಅವಳೇ ಅವನ ಭೂಮಿಕೆ

  ಬಾಹುಗಳು ಹಾತೊರೆದವು
  ಅವಳ ತೋಳ ತೆಕ್ಕೆಗೆ
  ತಬ್ಬಿ ಹಿಡಿದು ಚುಂಬಿಸಲು
  ಮೋಹ ಮಾಯೆ ಮೆರೆಸಲು

  ಮಿಲನ ಎಂದೋ
  ಮೋಹ ಮಾತ್ರ ಮಾಧವನನು ಅರಸಿದೆ
  ರಾಧೆಗೊಂದೇ ಕನಸು
  ಮಿಕ್ಕಿ ಮೀರಿ ಉಳಿದಿದೆ.

  - ಸತ್ಯಮಂಗಲ ಮಹಾದೇವ

 • satyamangala 32w

  By unknown writer

  Read More

  ಅಗ್ನಿ ಕುಸುಮ

  ಹೂವೊಂದು ತೊಟ್ಟು ಕಳಚಿ
  ನೋವಿನಿಂದ ಸಪ್ಪೆಮುಖ ಮಾಡಿ
  ಹಗುರಾಗಿ ನೆಲಕೆ ಬೀಳುವಾಗ
  ಭಾರವಾದ ಹೃದಯದಲ್ಲಿ
  ಗಾಯಗೊಂಡ ಪ್ರೀತಿ ಪಿಸುನುಡಿಯುತ್ತದೆ
  ಕಲ್ಲು, ಕಟ್ಟಿಗೆ ,ವಿಷಯುಕ್ತ ಉಗುರುಗಳು
  ಮುಖವಾಡದ ಬೆರಳುಗಳು
  ಇದ್ದಷ್ಟು ದಿನ ತಪ್ಪಿಸಿಕೊಂಡು ಬಂದ
  ಹೋರಾಟದಲ್ಲಿ ಬೆಂದು ಬೆಂದು ಬಾಡಿ ಬಿದ್ದಿದ್ದೇನೆ
  ಅಗ್ನಿ ಕುಸುಮ ಮಾತನಾಡುತ್ತಿದೆ.


  ಅಕ್ಕ ಸೀತೆ, ನನ್ನ ಅತ್ತೆಯ ಮಗಳು ಅಹಲ್ಯೆ
  ಗುರುಪುತ್ರಿ ದ್ರೌಪದಿ, ತಾರೆ ಮಂಡೋದರಿ
  ಈ ನನ್ನ ಸಂತಾನದ ಹಣೆಪಟ್ಟಿಗಳು
  ಮಣ್ಣು ಸೇರಿ ಮೊಳೆತು ಹೂವಾಗುವ ನನಗೆ
  ರಂಗು ನೀಡಿದ ಆ ಆತ್ಮಸಾಕ್ಷಿಗೆ
  ಯಾವತ್ತೂ ಭಂಗ ಬಂದಿಲ್ಲ
  ಮುಖಗಳೇ ಇಲ್ಲದ ಮುಖವಾಡಗಳು
  ಕುಣಿ ಕುಣಿದು ನರ್ತಿಸಿ
  ತಮ್ಮ ತಲೆಯಮೇಲೆ ತಾವೇ ಕೈ ಹೊತ್ತು
  ಭಸ್ಮವಾಗುವ ಕಾಲ ಬರಲಿಲ್ಲ
  ನನ್ನ ಸಂತಾನದ ಕರುಳ ನೋವು
  ಅಗ್ನಿಯಾಗಿ ಉರಿಯಲಿಲ್ಲ
  ಕೆಂಡವಾಗಿ ಕಾಯಲಿಲ್ಲ
  ಬೂದಿಮಾಡುವ ಹುನ್ನಾರಗಳಿಗೆ ಭಯಪಡಲಿಲ್ಲ

  ಗಂಧದರಮನೆ ಕಟ್ಟಿ
  ತಳಿರು ತೋರಣ ಒಟ್ಟಿ
  ಶಯನದ ಶೃಂಗಾರ ಮಾಡಿ
  ಪಟ್ಟ ಕಿರೀಟಗಳ ಆಸೆ ಹೊತ್ತು
  ಛತ್ರಿ ಚಾಮರಗಳ ಬೀಸಿದಾಗ
  ಆಸೆಗಳ ಕಮಟುವಾಸನೆಗೆ ನಾನು ಕುದ್ದು ಹೋಗಿದ್ದೇನೆ
  ನನ್ನ ಕುಲದ ಮೆರವಣಿಗೆಯಲ್ಲಿ
  ನಾನು ಬೆಂದು ಭಸ್ಮವಾಗಿದ್ದೇನೆ
  ಆದರೆ ನಾನು ನಾನಾಗೇ ಅಗ್ನಿ ಕುಸುಮವಾಗಿದ್ದೇನೆ
  ಬೆಂದಿದ್ದೇನೆ ಹೊರೆತು
  ಕಾಣದ ಕೈಗಳಲ್ಲಿ ಅರಳಲಿಲ್ಲ
  ಈ ಹಠ ಈ ಹೋರಾಟಕ್ಕೆ
  ಮತ್ತೆ ನನ್ನ. ಬಲವನೆಲ್ಲಾ ತುಂಬ ಬೇಕಿದೆ
  ಉರಿಯಬೇಕಿದೆ ಶತಮಾನಗಳ ಅಗ್ನಿ ಕುಸುಮವಾಗಿ...


  ‌ ‌‌ - ಶ್ವೇತ ಮಂಡ್ಯ

 • satyamangala 32w

  ಅಗ್ನಿ ಕುಸುಮ

  ಹೂವೊಂದು ತೊಟ್ಟು ಕಳಚಿ
  ನೋವಿನಿಂದ ಸಪ್ಪೆಮುಖ ಮಾಡಿ
  ಹಗುರಾಗಿ ನೆಲಕೆ ಬೀಳುವಾಗ
  ಭಾರವಾದ ಹೃದಯದಲ್ಲಿ
  ಗಾಯಗೊಂಡ ಪ್ರೀತಿ ಪಿಸುನುಡಿಯುತ್ತದೆ
  ಕಲ್ಲು, ಕಟ್ಟಿಗೆ ,ವಿಷಯುಕ್ತ ಉಗುರುಗಳು
  ಮುಖವಾಡದ ಬೆರಳುಗಳು
  ಇದ್ದಷ್ಟು ದಿನ ತಪ್ಪಿಸಿಕೊಂಡು ಬಂದ
  ಹೋರಾಟದಲ್ಲಿ ಬೆಂದು ಬೆಂದು ಬಾಡಿ ಬಿದ್ದಿದ್ದೇನೆ
  ಅಗ್ನಿ ಕುಸುಮ ಮಾತನಾಡುತ್ತಿದೆ.

  ಅಕ್ಕ ಸೀತೆ, ನನ್ನ ಅತ್ತೆಯ ಮಗಳು ಅಹಲ್ಯೆ
  ಗುರುಪುತ್ರಿ ದ್ರೌಪದಿ, ತಾರೆ ಮಂಡೋದರಿ
  ಈ ನನ್ನ ಸಂತಾನದ ಹಣೆಪಟ್ಟಿಗಳು
  ಮಣ್ಣು ಸೇರಿ ಮೊಳೆತು ಹೂವಾಗುವ ನನಗೆ
  ರಂಗು ನೀಡಿದ ಆ ಆತ್ಮಸಾಕ್ಷಿಗೆ
  ಯಾವತ್ತೂ ಭಂಗ ಬಂದಿಲ್ಲ

 • satyamangala 34w

  ಯಾರು ?

  ಚರ್ಮ ಸುಲಿದು ಕರುಳ ಬಿಡಿಸಿ
  ಮಾಂಸ ವಿಂಗಡಿಸಿದ ಕಟುಕ
  ಗಲ್ಲಾಪೆಟ್ಟಿಗೆಯಲ್ಲಿದ್ದಳು ಲಕ್ಷ್ಮಿ
  ರಕ್ತಸಿಕ್ತ ಕೈಗಳು ಮುಟ್ಟುತ್ತವೆ ಅವಳನ್ನು
  ನೋಟಿನ ರೂಪವಾಗಿ ಅವಳು ಓಡಾಡುತ್ತಲೇ ಇದ್ದಾಳೆ
  ಜೇಬಿನಲ್ಲಿಳಿದು ಹೃದಯದಲ್ಲಿ ಆಸೀನಳಾದಳು
  ಮುಟ್ಟಿದವನ ಅವಳು ಕೇಳಲಿಲ್ಲ?
  ನೀನು ಕಟುಕನೇ ?
  ನೀನು ಮಾಂಸಾಹಾರಿಯೇ ?
  ನೀನು ಯಾರು ಎಂದು !


  ©ಸತ್ಯಮಂಗಲ ಮಹಾದೇವ

 • satyamangala 34w

  ಗಾಂಧಿ ಸತ್ತಿಲ್ಲ

  ಕಟ್ಟೆಯ ಮೇಲೆ
  ಹಟ್ಟಿದನ ಕೊಟ್ಟಿಗೆ ಸೇರುವಲ್ಲಿ
  ಒತ್ತೊತ್ತಿಗೆ ಹೆಣೆದ ಮಂಕರಿಯ ಮುಂದೆ
  ಮಣಬಾರದ ಚಿಂತೆಗಳ ಹೆಗಲೇರಿಸಿ ಕೂತ
  ಅಜ್ಜನ ಹಣೆ ಮೇಲೆ ವಸಂತದ ಹೆಣಗಳ ರಾಶಿ
  ಹನಿ ಹನಿಯಾಗಿ ನೆಲಕೆ ದುಮುಕುತ್ತವೆ
  ಬಾಳ ಝರಿಯಾಗಿ ಬಳಲದೇ ಬಳುಕುವ ಹುಮ್ಮಸ್ಸಲ್ಲಿ
  ಬಾಲನಾಗಿ ನಿಂತು ನೋಡುತ್ತೇನೆ
  ನನ್ನ ಗಾಂಧಿ ಸತ್ತಿಲ್ಲ

  ಸಿನಿಮಾ ಟಾಕೀಸುಗಳ ಮುಂದಿನ ಬೆಂಚುಗಳಲ್ಲಿ
  ಮೋಟು ಬೀಡಿ ಸೇದಿ ನಾಳೆಗೆ ಇರಿಸುವವನಲ್ಲಿ
  ಟಿಕೇಟು ಕೊಟ್ಟು ಚಿಲ್ಲರೆ ಬರೆದುಕೊಡುವವನ ಎದೆಯೊಳಗೆ
  ತೂಕ ಹಾಕಿ ತೂಕ ಬಚ್ಚಿಡುವ ತೂಕವಿಲ್ಲದವರ
  ತೂಕದ ಬೊಟ್ಟುಗಳಲ್ಲಿ
  ಅಳೆದು ಮಡುಚಿ ಕತ್ತರಿಸಿ ಒಲಿಯುವ ಸಿಂಪಿಗನ
  ಕತ್ತರಿಯ ನೇರ ನಡವಳಿಕೆಯಲ್ಲಿ
  ಗಾಂಧಿ ಸದಾ ನೇಣುಗಂಬಕ್ಕೆ ಏರುತ್ತಲೇ ಇದ್ದಾನೆ.

  ಕೋರ್ಟುಗಳ ನ್ಯಾಯಾಧೀಶರ ಹಿಂದೆ
  ಪೋಟೊದಲ್ಲಿ
  ಪೋಲಿಸ್ ಠಾಣೆಯ ಲಾಠಿ
  ಬಂದೂಕುಗಳ ಜೊತೆಯಲ್ಲಿ
  ಆಸ್ಪತ್ರೆಯ ಗೋಡೆಗಳ ಮೇಲೆ
  ನಿಂತರೂ ನಿಲ್ಲದ ಹಾಗೆ
  ಕೂತರೂ ಕಾಣದ ಹಾಗೆ
  ನಿಂತೇ ಇರುವ ಮೋಹಕ ನಗು
  ಕೂರಲಾಗದ ವ್ಯಥೆಯ ಚರಕಸಂಹಿತೆ
  ಗಾಂಧಿ ಕುಳಿತುಕೊಳ್ಳಲಾಗದ ಚಡಪಡಿಕೆ ಮಾತ್ರ....


  ರಾಷ್ಟ್ರಗೀತೆಯ ಹಾಡಿಗಾಗಿ
  ದೇಶದ ಅಭಿಮಾನಕಾಗಿ
  ನೆನೆವ ನಿನ್ನ ಮಾತಿಗಾಗಿ‌
  ಒಂದು ದಿನ‌ ಮಾತ್ರ ನೆನಪಿಸಿಕೊಳ್ಳುವ
  ನನ್ನಂತವನಿಗೂ
  ತಿಂಗಳ ಕೊನೆಯಲ್ಲಿ ನಗುತರಿಸುವ
  ಸಂಬಳದ ನೋಟುಗಳಲ್ಲಿ
  ಮಾಸಲೇ ಇಲ್ಲ ಗಾಂಧಿ‌ ನಿನ್ನ ನಗು.....

  ವಿನಿಮಯ ಮಾಡಲಾಗದ ನಿನ್ನ
  ವಿಲೇವಾರಿ ಮಾಡುವ ಈ ಸಂತೆಯೊಳಗೆ
  ನಾನೂ ಇದ್ದೇನೆ
  ವೃತ್ತಗಳಲ್ಲಿ ಪ್ರತಿಭಟನೆಗಳ ನೋಡಿ ನೋಡಿ
  ನೀನು ಸುಮ್ಮನೆ ಕೂತಿದ್ದೀಯೆ
  ಸುಮ್ಮನಿರುವುದು ಸಾಧ್ಯವೇ ?
  ಪದ್ಯ ಬರೆಯುವಾಗ ನಾನು ಮತ್ತೆ ನಿನ್ನ
  ನೆನಪಿಸಿಕೊಳ್ಳಬಹುದು ಅಷ್ಟೆ
  ಗಾಂಧಿಯಾಗುವ ಘಳಿಗೆ ಯಾವಾಗ ಬರುತ್ತದೆಯೋ
  ಕಾಯುವ ಕಾಲದ ಕಣ ನಾನು
  ಮುನ್ನಡೆಸಿದ ಮಹಾ ಚೇತನ ನೀನು.....

  - ಸತ್ಯಮಂಗಲ ಮಹಾದೇವ
  ©satyamangala